ಶಾಹಪುರ
	ಭಾರತದ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಜೇವರಗಿ ಮತ್ತು ಚಿತ್ತಾಪುರ ತಾಲ್ಲೂಕುಗಳೂ ಪೂರ್ವದಲ್ಲಿ ಯಾದಗಿರಿ, ದಕ್ಷಿಣದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ, ಪಶ್ಚಿಮದಲ್ಲಿ ಸುರಪುರ ತಾಲ್ಲೂಕುಗಳೂ ಆಗ್ನೇಯದಲ್ಲಿ ರಾಯಚೂರು ತಾಲ್ಲೂಕು ಮತ್ತು ಆಂಧ್ರಪ್ರದೇಶ ಸುತ್ತುವರಿದಿವೆ. ಯಾದಗಿರಿ ಉಪವಿಭಾಗಕ್ಕೆ ಸೇರಿರುವ ಈ ತಾಲ್ಲೂಕಿನಲ್ಲಿ ಗೋಗಿ, ಶಾಹಪುರ, ದೋರನಹಳ್ಳಿ, ಹಿರಿಹಯ್ಯಾಳ ಮತ್ತು ವಡಗೆರ ಹೋಬಳಿಗಳಿದ್ದು ಒಟ್ಟು 159 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 1,678 ಚ.ಕಿಮೀ. ಜನಸಂಖ್ಯೆ 2,84,030.

	ಈ ತಾಲ್ಲೂಕಿನಲ್ಲಿ ಶಾಹಪುರ ಪಟ್ಟಣದ ಬಳಿ ಮಹಮ್ಮದಪುರ ಬೆಟ್ಟ ಹಬ್ಬಿದೆ. ತಾಲ್ಲೂಕಿನ ಬಹುಭಾಗ ಸಮತಟ್ಟು ಪ್ರದೇಶಕ್ಕೆ ಸೇರಿದೆ. ಸಿಮೆಂಟ್ ತಯಾರಿಕೆಗೆ ಬೇಕಾದ ಸುಣ್ಣಕಲ್ಲು ಈ ತಾಲ್ಲೂಕಿನಲ್ಲಿ ದೊರೆಯುವುದು. ತಾಲ್ಲೂಕಿನ ಹೆಚ್ಚು ಭಾಗ ಕಪ್ಪುಮಣ್ಣಿನ ಪ್ರದೇಶವಾ ದರೂ ಮರಳುಮಿಶ್ರಿತ ಸಾಮಾನ್ಯ ಕೆಂಪುಮಣ್ಣಿನ ಭೂಮಿಯನ್ನು ಕಾಣಬಹುದು. ಈ ತಾಲ್ಲೂಕಿನಲ್ಲಿ ಅರಣ್ಯಪ್ರದೇಶ ಅಷ್ಟಾಗಿಲ್ಲ. ಅಲ್ಲಲ್ಲಿ ಸ್ವಲ್ಪ ಕುರುಚಲು ಕಾಡುಪ್ರದೇಶವಿದೆ. ಬೇಸಗೆಯಲ್ಲಿ ಸೆಕೆ ಹೆಚ್ಚಾಗಿರುವ ಈ ತಾಲ್ಲೂಕಿನ ವಾರ್ಷಿಕ ಮಳೆ 730 ಮಿಮೀ.

	ಕೃಷ್ಣಾ ಮತ್ತು ಭೀಮಾ ಈ ತಾಲ್ಲೂಕಿನ ಮುಖ್ಯ ನದಿಗಳು. ತಾಲ್ಲೂಕಿನ ದಕ್ಷಿಣದಲ್ಲಿ ತಾಲ್ಲೂಕಿನ ಗಡಿಯಾಗಿ ಹರಿಯುವ ಕೃಷ್ಣಾನದಿ ರಾಯಚೂರು ಜಿಲ್ಲೆಯ ದೇವದುರ್ಗ ಮತ್ತು ರಾಯಚೂರು ತಾಲ್ಲೂಕುಗ ಳನ್ನು ಬೇರ್ಪಡಿಸಿದೆ. ಈ ನದಿಯ ಎಡದಂಡೆಯ ಫಲವತ್ತಾದ ಭಾಗ ಈ ತಾಲ್ಲೂಕಿಗೆ ಸೇರಿದೆ. ಭೀಮಾನದಿ ಈ ತಾಲ್ಲೂಕಿನ ಉತ್ತರದಿಂದ ಪೂರ್ವಕ್ಕೆ ಹರಿದು ಅನಂತರ ತಾಲ್ಲೂಕಿನ ಆಗ್ನೇಯದಲ್ಲಿ ಸಂಗಮದ ಬಳಿ ಕೃಷ್ಣಾನದಿಯನ್ನು ಸೇರಿಕೊಳ್ಳುವುದು. ಈ ನದಿಯ ಫಲವತ್ತಾದ ಬಲದಂಡೆ ಪ್ರದೇಶ ಈ ತಾಲ್ಲೂಕಿಗೆ ಸೇರಿದೆ. ಈ ನದಿ ಚಿತ್ತಾಪುರ, ಯಾದಗಿರಿ ಮತ್ತು ಆಂಧ್ರಪ್ರದೇಶವನ್ನು ಈ ತಾಲ್ಲೂಕಿನಿಂದ ಬೇರ್ಪಡಿಸಿದೆ. ತಾಲ್ಲೂಕಿನಲ್ಲಿ ಜೋಳ, ಸಜ್ಜೆ, ಗೋಧಿ, ಬತ್ತ, ತೊಗರಿ, ಕಡಲೆ, ಮೆಣಸಿನಕಾಯಿ, ಹತ್ತಿ, ಸೇಂಗಾ ಮುಂತಾದವನ್ನು ಬೆಳೆಯುತ್ತಾರೆ. ವ್ಯವಸಾಯದ ಜೊತೆಗೆ ಪಶುಪಾಲನೆಯೂ ಉಂಟು. ಕೃಷ್ಣಾ ಮತ್ತು ಭೀಮಾನದಿ ಪ್ರದೇಶಗಳಲ್ಲಿ ಮತ್ಸ್ಯೋದ್ಯಮವಿದೆ.

	ಈ ತಾಲ್ಲೂಕಿನಲ್ಲಿ ಚರ್ಮೋದ್ಯೋಗವಿದ್ದು ಪಾದರಕ್ಷೆಗಳ ತಯಾರಿಕೆಯುಂಟು. ಕೈಮಗ್ಗದ ಸೀರೆಗಳಿಗೆ ತಾಲ್ಲೂಕು ಪ್ರಸಿದ್ಧವಾದುದು. ಇಲ್ಲಿ ಸಿಕ್ಕುವ ಸುಣ್ಣಕಲ್ಲನ್ನು ತೆಗೆದು ಸಿಮೆಂಟ್ ಕಾರ್ಖಾನೆಗೆ ಸಾಗಿಸುವರು. ತಾಲ್ಲೂಕಿನಲ್ಲಿ ಸುರಪುರ-ಗುಲ್ಬರ್ಗ ರಾಜ್ಯಹೆದ್ದಾರಿಯಿದ್ದು, ತಾಲ್ಲೂಕಿನ ಎಲ್ಲ ಕಡೆಗೂ ರಸ್ತೆಸಂಪರ್ಕವಿದೆ. ಶಾಹಪುರದ ಈಶಾನ್ಯಕ್ಕೆ 34 ಕಿಮೀ ದೂರದಲ್ಲಿ ಯಾದಗಿರಿ ರೈಲ್ವೆ ನಿಲ್ದಾಣವಿದ್ದು ಈ ತಾಲ್ಲೂಕಿಗೆ ಅದೇ ರೈಲ್ವೆ ಸಂಪರ್ಕ ಕೇಂದ್ರವಾಗಿದೆ.

	ಶಾಹಪುರದ ವಾಯವ್ಯಕ್ಕೆ 11 ಕಿಮೀ ದೂರದಲ್ಲಿರುವ ಗೋಗಿಯಲ್ಲಿ ಆದಿಲ್‍ಶಾಹೀ ಕಾಲದ ದೊಡ್ಡ ಮಸೀದಿ ಮತ್ತು ಗೋರಿಗಳಿವೆ. ಪ್ರತಿವರ್ಷ ಇಲ್ಲಿ ಜಾತ್ರೆ ಸೇರುವುದು. ಶಾಹಪುರದ ಆಗ್ನೇಯಕ್ಕೆ 19 ಕಿಮೀ ದೂರದಲ್ಲಿರುವ ಹಿರಿಹಯ್ಯಾಳ ಕೃಷ್ಣಾನದಿಯ ಎಡದಂಡೆಯ ಮೇಲಿದೆ. ಹಯ್ಯಾಳಪ್ಪನ ದೇವಾಲಯವೆಂದು ಕರೆಯುವ ಇಲ್ಲಿನ ಲಿಂಗೇಶ್ವರ ದೇವಾಲಯ ಪ್ರಸಿದ್ಧವಾದದ್ದು. ಪ್ರತಿ ಜನವರಿಯಲ್ಲಿ ಜಾತ್ರೆ ನಡೆಯುತ್ತದೆ. ಶಾಹಪುರದ ನೈಋತ್ಯಕ್ಕೆ 11 ಕಿಮೀ ದೂರದಲ್ಲಿರುವ ಸಗರದಲ್ಲಿ ಶೇಕ್ ಸೂಫಿ ಸರಮಸ್ತ ಸಾಹೇಬರ ಗೋರಿಯಿದೆ. ಇಲ್ಲಿ ಪ್ರತಿವರ್ಷ ನಡೆಯುವ ಜಾತ್ರೆ ಪ್ರಸಿದ್ಧವಾದದ್ದು. ಶಿವಶರಣ ಸಗರದ ಬ್ರಹ್ಮಯ್ಯ (ಬೊಮ್ಮಯ್ಯ) ಈ ಊರಿನವನು.	
									*
	ಶಾಹಪುರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಸುರಪುರ-ಗುಲ್ಬರ್ಗ ಹೆದ್ದಾರಿಯಲ್ಲಿ ಗುಲ್ಬರ್ಗದ ದಕ್ಷಿಣಕ್ಕೆ 77 ಕಿಮೀ ದೂರದಲ್ಲಿದೆ. ಜನಸಂಖ್ಯೆ 34,347.

	ಈ ಪಟ್ಟಣ ಸುತ್ತಲ ಗ್ರಾಮಗಳಿಗೆ ಪ್ರಸಿದ್ಧ ವ್ಯಾಪಾರ ಕೇಂದ್ರ. ಸುತ್ತಲ ಗ್ರಾಮ ಮತ್ತು ಪಟ್ಟಣಗಳಿಗೆ ಇಲ್ಲಿಂದ ಮಾರ್ಗಸಂಪರ್ಕವಿದ್ದು, ವ್ಯಾಪಾರ ವಾಣಿಜ್ಯದ ಅಭಿವೃದ್ಧಿಗೆ ನೆರವಾಗಿದೆ. ಇಲ್ಲಿ ನಿಯಂತ್ರಿತ ಮಾರುಕಟ್ಟೆ ಇದೆ. ಸೇಂಗಾ, ಹತ್ತಿ, ಕುಸುಬೆ ಮತ್ತು ಕೈಮಗ್ಗದ ಸೀರೆಗಳು, ಪಾದರಕ್ಷೆಗಳು ಇಲ್ಲಿಂದ ಹೆಚ್ಚಾಗಿ ರಫ್ತಾಗುವುವು.	
		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

			(ಬಿ.)